ಹಾವೇರಿ
	ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ; ತಾಲ್ಲೂಕು ಮತ್ತು ಅವುಗಳ ಆಡಳಿತ ಕೇಂದ್ರ. 

	ಜಿಲ್ಲೆ: ಧಾರವಾಡ ಜಿಲ್ಲೆಯ ಒಂದು ತಾಲ್ಲೂಕಾಗಿದ್ದ ಹಾವೇರಿ 1997 ಆಗಸ್ಟ್ 15ರಂದು ಒಂದು ಜಿಲ್ಲೆಯಾಗಿ ರೂಪುಗೊಂಡಿತು. ಈ ಜಿಲ್ಲೆಯನ್ನು ಉತ್ತರದಲ್ಲಿ ಧಾರವಾಡ, ಗದಗ ಜಿಲ್ಲೆಗಳೂ ಪೂರ್ವದಲ್ಲಿ ಬಳ್ಳಾರಿ ದಾವಣಗೆರೆ ಜಿಲ್ಲೆಗಳೂ ಪಶ್ಚಿಮದಲ್ಲಿ ಉತ್ತರ ಕನ್ನಡ ಜಿಲ್ಲೆಯೂ ದಕ್ಷಿಣದಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳೂ ಸುತ್ತುವರೆದಿವೆ. ಬೆಳಗಾಂವಿ ವಿಭಾಗಕ್ಕೆ ಸೇರಿದ ಈ ಜಿಲ್ಲೆಯಲ್ಲಿ ಶಿಗ್ಗಾಂವಿ, ಹಾವೇರಿ, ಸವಣೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಾಣೆಬೆನ್ನೂರು - ಈ ಏಳು ತಾಲ್ಲೂಕುಗಳು ಸೇರಿವೆ. 19 ಹೋಬಳಿಗಳೂ 675 ಗ್ರಾಮಗಳೂ ಇವೆ. ಪುರಸಭಾಆಡಳಿತವಿರುವ 7 ಪಟ್ಟಣಗಳಿವೆ. ಜಿಲ್ಲೆಯ ವಿಸ್ತೀರ್ಣ 4,851 ಚ.ಕಿಮೀ. ಜನಸಂಖ್ಯೆ: 14,37,860.

	ಹಾವೇರಿ ಜಿಲ್ಲೆಯ ಮಧ್ಯದಲ್ಲಿ ಹಾವೇರಿ ತಾಲ್ಲೂಕಿನ ದಕ್ಷಿಣದಲ್ಲಿರುವ ಬ್ಯಾಡಗಿ ತಾಲ್ಲೂಕಿನ ಈ ಭೂಪ್ರದೇಶ ಕೆಲವು ಸಣ್ಣಗುಡ್ಡಗಳನ್ನು ಬಿಟ್ಟರೆ ಹೆಚ್ಚು ಭಾಗ ಸಮತಟ್ಟಾಗಿದೆ. ಪೂರ್ವದಲ್ಲಿ ದೇವರ ಗುಡ್ಡಗಳಿವೆ. ಮಸಾರಿ ಮತ್ತು ಎರೆಮಣ್ಣಿನ ಈ ಭಾಗದಲ್ಲಿ ಎರೆಮಣ್ಣಿನ ಪ್ರದೇಶ ಫಲವತ್ತಾದದ್ದು. ಇಲ್ಲಿನ ಬೇಸಾಯ ಮಳೆಯನ್ನೆ ಹೆಚ್ಚಾಗಿ ಅವಲಂಬಿಸಿ ಕೊಂಡಿದೆ. ಬ್ಯಾಡಗಿಯ ಪ್ರಸಿದ್ಧ ಕ್ಷೇತ್ರ ಕನಕದಾಸರ ಕಾಗಿನೆಲೆಯ ಕೆರೆ, ಚಿಕ್ಕಬಾಸೂರ ಕೆರೆ, ತುಂಮೂರ ಕೆರೆ ಇವು ಹೆಸರಿಸಬಹುದಾದ ಕೆರೆಗಳು. ಇಲ್ಲಿಯ ಬೆಳೆಗಳಲ್ಲಿ ಬ್ಯಾಡಗಿ ಮೆಣಸಿನಕಾಯಿ ಪ್ರಸಿದ್ಧಿ ಪಡೆದಿದೆ. ಬಿಳಿಜೋಳ, ಹತ್ತಿ, ಸೇಂಗಾ, ಸಾಮೆ ಬೆಳೆಯುತ್ತಾರೆ. ಜಿಲ್ಲೆಯ ದಕ್ಷಿಣಆಗ್ನೇಯ ಪ್ರದೇಶದ ರಾಣೆಬೆನ್ನೂರು ತಾಲ್ಲೂಕು ಸೇರಿದಂತೆ ಇರುವ ಪ್ರದೇಶ ಮಲೆನಾಡ ಅಂಚಿನಲ್ಲಿದೆ. ಐರಣಿಗುಡ್ಡ ಸೇರಿದಂತೆ ಹುಲ್ಲುಗಾವಲಿನ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಉಪಯುಕ್ತ ಮರಗಳೊಡನೆ ಗಂಧದ ಮರಗಳೂ ಇವೆ. ಕಪ್ಪು ಮತ್ತು ಕೆಂಪು ಮಸಾರಿ ಭೂಮಿಯಿದ್ದು ಜೋಳ, ಗೋಧಿ, ಬತ್ತ, ಸೇಂಗಾ, ರಾಗಿ, ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಬ್ಯಾಡಗಿಯ ಉತ್ತರ ಮತ್ತು ವಾಯವ್ಯ ಪ್ರದೇಶವನ್ನು ಶಿಗ್ಗಾಂವಿ ತಾಲ್ಲೂಕು ಒಳಗೊಂಡಿದೆ. ಪಶ್ಚಿಮ ಘಟ್ಟ ಸೆರಗಿನಲ್ಲಿರುವ ಈ ಭೂಪ್ರದೇಶ ಪೂರ್ವದ ಕಡೆಗೆ ಇಳಿಜಾರಾಗಿ ಮುಂದುವರಿದಿದೆ. ಕಾಡು ಸಾಂದ್ರವಾಗಿದ್ದು ತೇಗ, ಗಂಧ, ಹಲಸು, ಅಳಲೆ, ಮಾವು, ಆಲ, ಅತ್ತಿ, ಬಿಳಿನಂದಿ, ಬೀಟೆ ಮರಗಳ ಆಶ್ರಯತಾಣವಾಗಿದೆ. ಹುಲಿ, ಚಿರತೆ, ಕಾಡುಹಂದಿ, ಕರಡಿ, ತೋಳ ಮೊದಲಾದ ಪ್ರಾಣಿಸಂಪತ್ತಿನಿಂದ ಕೂಡಿದೆ. ಬತ್ತ, ರಾಗಿ, ಜೋಳ, ಮುಖ್ಯ ಬೆಳೆಗಳು. ವಿವಿಧ ದ್ವಿದಳ ಧಾನ್ಯಗಳನ್ನೂ ತೋಟಗಳಲ್ಲಿ ವಿವಿಧ ಹಣ್ಣುಗಳನ್ನೂ ಬೆಳೆಯುತ್ತಾರೆ. ಜಿಲ್ಲೆಯ ಪಶ್ಚಿಮ ಪ್ರದೇಶ ಹಾನುಗಲ್ಲು ತಾಲ್ಲೂಕನ್ನು ಒಳಗೊಂಡಿದೆ. ಮಲೆನಾಡು ಭೂಪ್ರದೇಶವನ್ನುಳ್ಳ ಈ ಭಾಗ ಬೆಟ್ಟಗುಡ್ಡಗಳಿಂದ ಕೂಡಿದೆ. ರಕ್ಷಿತ ಅರಣ್ಯ ಪ್ರದೇಶವೂ ಇದ್ದು ಗಂಧದ ಮರವೂ ಸೇರಿದಂತೆ ಬೆಲೆಬಾಳುವ ಮರಗಳಿವೆ. ಬತ್ತದ ಬೆಳೆ ಇಲ್ಲಿ ಹೆಚ್ಚು. ಫಲವತ್ತಾದ ರೇವೆ ಮಣ್ಣಿನ ಪ್ರದೇಶದಲ್ಲಿ ಕಬ್ಬು, ರಾಗಿ, ದ್ವಿದಳಧ್ರಾನ್ಯಗಳು, ಜೋಳ, ಹತ್ತಿ ಬೆಳೆಯುವರು. ತೋಟಗಳಲ್ಲಿ ಅಡಕೆ, ತೆಂಗು, ಹೊಗೆಸೊಪ್ಪು ಬೆಳೆಹೆಚ್ಚು. ಸೇಂಗಾ, ಹರಳು ಹುಚ್ಚೆಳ್ಳು ಬೆಳೆಯುಂಟು. ಜಿಲ್ಲೆಯ ಮಧ್ಯಭಾಗದಲ್ಲಿ ಹಾವೇರಿ ತಾಲ್ಲೂಕು ಸೇರಿದಂತೆ ರೇವೆ ಮಣ್ಣು ಮತ್ತು ಕೆಂಪುಮಿಶ್ರಿತ ಕಪ್ಪುಮಣ್ಣಿನ ಬಯಲು ಪ್ರದೇಶವಿದೆ. ಈ ಭಾಗದಲ್ಲಿ ಜೋಳ, ಬತ್ತ, ರಾಗಿ, ನವಣೆ, ಕಬ್ಬು, ಸೇಂಗಾ, ಗುರೆಳ್ಳು, ಮೆಣಸಿನಕಾಯಿ, ಈರುಳ್ಳಿ, ಹತ್ತಿ ಬೆಳೆಯುವರು. ಈ ಜಿಲ್ಲೆಯ ಉತ್ತರಭಾಗ ಮತ್ತು ಸವಣೂರು ತಾಲ್ಲೂಕುಗಳಲ್ಲಿ ಕಪ್ಪುಜೇಡಿಮಣ್ಣು ಮತ್ತು ಮರಳು ಮಿಶ್ರಿತ ಕಪ್ಪುಮಣ್ಣಿನ ಪ್ರದೇಶವಿದೆ. ಇದು ಜೋಳ, ಸೇಂಗಾ, ಹತ್ತಿ ಬೆಳೆಯುವ ಭೂ ಭಾಗವಾಗಿದೆ. ಜಿಲ್ಲೆಯ ದಕ್ಷಿಣ ಭಾಗ ಹಿರೇಕೆರೂರು ತಾಲ್ಲೂಕು ಒಳಗೊಂಡಂತೆ ಸಹ್ಯಾದ್ರಿವಲಯದ ಪೂರ್ವಪ್ರದೇಶವಾಗಿದ್ದು ಮಾಸೂರು ಮತ್ತು ಕಡೂರ ಗುಡ್ಡಗಳಿಂದ ಕೂಡಿದೆ. ಗಂಧದ ಮರಗಳಿಂದ ಕೂಡಿದ ಕುರುಚಲು ಕಾಡು ಪ್ರದೇಶವಿದೆ. ಹುಳಕೆರೆ ಮಣ್ಣಿನಿಂದ ಕೆಲವೆಡೆ ಕೆಂಪು ಮತ್ತು ಕಪ್ಪು ಮಿಶ್ರಿತ ಮಣ್ಣಿನ ಪ್ರದೇಶವಿದ್ದು ಜೋಳ, ಬತ್ತ, ಕಬ್ಬು, ರಾಗಿ, ತೊಗರಿ, ಮೆಣಸಿನಕಾಯಿ ಮತ್ತು ತೈಲ ಬೀಜಗಳನ್ನು ಬೆಳೆಯುತ್ತಾರೆ. ಒಟ್ಟು ಬಿತ್ತನೆಯ ಪ್ರದೇಶ 4,64,193 ಹೆಕ್ಟೇರುಗಳು (1998-99), ಕಾಲುವೆ, ಕೆರೆ, ಬಾವಿಗಳಿಂದ ಒಟ್ಟು ನೀರಾವರಿಯಾದದ್ದು 6,111 ಹೆಕ್ಟೇರ್‍ಗಳು. 1998-99ರಲ್ಲಿ ಈ ಜಿಲ್ಲೆಯ ಮುಖ್ಯಬೆಳೆಗಳಾದ ಬತ್ತವನ್ನು 54,375 ಹೆಕ್ಟೇರ್. ಗಳಲ್ಲೂ ರಾಗಿ 4,756 ಹೆ, ಜೋಳ 73,706 ಹೆ, ಸಜ್ಜೆ 892 ಹೆ, ಮುಸುಕಿನ ಜೋಳ 54,083 ಹೆ, ಗೋದಿ 2138 ಹೆ, ಕಡಲೆ 1902 ಹೆ, ತೊಗರಿ 7477 ಹೆ, ದ್ವಿದಳಧಾನ್ಯಗಳು 6262 ಹೆ, ನೆಲಗಡಲೆ 37,861 ಹೆ, ಕಬ್ಬು 6,073 ಹೆ, ಹತ್ತಿ 79,382 ಹೆ. ಗಳಲ್ಲಿ ಬೆಳೆಯಲಾಗಿತ್ತು. ಈ ಜಿಲ್ಲೆಯಲ್ಲಿ ಸಾಕಷ್ಟು ಪ್ರಾಣಿಸಂಪತ್ತೂ ಇದೆ. 2001ರಲ್ಲಿ ಜಿಲ್ಲೆಯಲ್ಲಿ ಒಟ್ಟು 3,103 ಮೆಟ್ರಿಕ್ ಟನ್ ಮೀನನ್ನು ಹಿಡಿಯಲಾಗಿತ್ತು.

	ಜಿಲ್ಲೆಯಲ್ಲಿ ಉತ್ತಮ ಹವಾಗುಣವಿದೆ. ಕರ್ನಾಟಕ ರಾಜ್ಯದಂತೆಯೇ ನವಂಬರ್, ಡಿಸೆಂಬರ್, ಜನವರಿ ತಿಂಗಳು ಚಳಿಗಾಲ. ಫೆಬ್ರವರಿ, ಮಾರ್ಚಿ, ಏಪ್ರಿಲ್ ಬೇಸಿಗೆ ಕಾಲವಾಗಿದ್ದು ಮೇ ನಿಂದ ಅಕ್ಟೋಬರ್‍ವರೆಗೆ ಮಳೆಗಾಲವಾಗಿರುತ್ತದೆ. ಜಿಲ್ಲೆಯ ಸರಾಸರಿ ಮಳೆ 753 ಮಿಮೀ. ಜಿಲ್ಲೆಯಲ್ಲಿ 47,454 ಹೆ. ಅರಣ್ಯ ಪ್ರದೇಶವಿದ್ದು ತೊರೆಗಳ ತೀರದಲ್ಲಿ ಬಿದಿರು ಮೆಳೆಯ ಕಾಡು ಪ್ರದೇಶವಿದ್ದು ಹುಲಿ, ಚಿರತೆ, ಕರಡಿ, ತೋಳ ಕಾಡುಹಂದಿ ಮುಂತಾದವುಗಳಿವೆ. ಜಿಲ್ಲೆಯ ಹಸಿರು ವನಪ್ರದೇಶಗಳಲ್ಲಿ ಹಾವುಗಳನ್ನೂ ವಿವಿಧ ಪಕ್ಷಿ ಸಮೂಹವನ್ನೂ ಕಾಣಬಹುದು. ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ 119 ಚ.ಕಿಮೀ ಪ್ರದೇಶವನ್ನಾವರಿಸಿದೆ.

	ಈ ಜಿಲ್ಲೆಯ ಮುಖ್ಯನದಿ ತುಂಗಭದ್ರಾ. ದಾವಣಗೆರೆ ಜಿಲ್ಲೆಯಿಂದ ಹರಿದು ಬರುವ ಈ ನದಿ ಜಿಲ್ಲೆಯ ದಕ್ಷಿಣಾಗ್ನೇಯ ದಿಕ್ಕಿನಲ್ಲಿ ಶಂಕರನಹಳ್ಳಿಯ ಬಳಿ ಜಿಲ್ಲಾ ಸಂಪರ್ಕಪಡೆದು ಮುಂದೆ ಈ ಜಿಲ್ಲೆಯ ಗಡಿಯಾಗಿ ಆಗ್ನೇಯಾಭಿಮುಖವಾಗಿ ಮುಂದುವರಿದು ದಾವಣಗೆರೆ ಜಿಲ್ಲೆಯನ್ನು ಬೇರ್ಪಡಿಸುವುದು. ಅನಂತರ ಹಾವೇರಿ ಜಿಲ್ಲೆಯ ಪೂರ್ವದಲ್ಲಿ ಉತ್ತರಾಭಿಮುಖವಾಗಿ ಹರಿದು ಬಳ್ಳಾರಿ ಜಿಲ್ಲೆಯನ್ನು ಬೇರ್ಪಡಿಸುವುದು. ತುಂಗಭದ್ರಾನದಿಯ ಎಡದಂಡೆಯಲ್ಲಿ ಬರುವ ಈ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರು ಮತ್ತು ಹಾವೇರಿ ತಾಲ್ಲೂಕುಗಳ ಉದ್ದ ಸು. 150 ಕಿಮೀ ನಷ್ಟಿದ್ದು ಅಲ್ಲಿಯ ಫಲವತ್ತಾದ ಭೂಮಿಗೆ ನೀರುಣಿಸುವುದು. ವರದಾ ನದಿ ಈ ಜಿಲ್ಲೆಯನ್ನು ನೈಋತ್ಯಭಾಗದಲ್ಲಿ ಹಾನಗಲ್ಲು ತಾಲ್ಲೂಕನ್ನು ಪ್ರವೇಶಿಸುವುದು. ಮುಂದೆ ಪೂರ್ವಾಭಿಮುಖವಾಗಿ ಹರಿದು ಸವಣೂರು, ಹಾವೇರಿ ತಾಲ್ಲೂಕುಗಳ ಗಡಿಯಾಗಿ ಸಾಗಿ ಮುಂದೆ ಹಾವನೂರಿನ ಗಳಗನಾಥ ಗ್ರಾಮದ ಬಳಿ ತುಂಗಭದ್ರೆಯನ್ನು ಸೇರಿಕೊಳ್ಳುವುದು. ಈ ನದಿಯ ಹರಿವಿನ ಉದ್ದ ಸು. 101 ಕಿಮೀ. ಇದರ ಜಲಾನಯನ ಪ್ರದೇಶ 1,200 ಚ.ಕಿಮೀ. ಕುಮುದ್ವತಿ ನದಿ ಜಿಲ್ಲೆಯ ಹಿರೇಕೆರೂರು ಮತ್ತು ರಾಣೆಬೆನ್ನೂರು ತಾಲ್ಲೂಕುಗಳಲ್ಲಿ ಸು. 32 ಕಿಮೀ ಪ್ರವಹಿಸಿ ಹೊಳೆಅನವೇರಿ ಬಳಿ ತುಂಗಭದ್ರೆಯನ್ನು ಸೇರಿಕೊಳ್ಳುವುದು. ಈ ನದಿಯ ಜಲಾನಯನ ಪ್ರದೇಶ ಸು. 512 ಚ.ಕಿಮೀ. ಮಾಸೂರು ಮತ್ತು ಮದಗಕೆರೆಗಳಿಗೆ ಕುಮುದ್ವತಿ ನದಿಯೇ ಜೀವನಾಡಿ. ಉತ್ತರ ಕನ್ನಡ ಜಿಲ್ಲೆಯಿಂದ ಹರಿದು ಬಂದು ಹಾವೇರಿ ಜಿಲ್ಲೆಯನ್ನು ಹಾನಗಲ್ಲು ತಾಲ್ಲೂಕಿನ ವಂತಿಗೆ ಗ್ರಾಮದ ಬಳಿ ಪ್ರವೇಶಿಸುವ ಧರ್ಮಾನದಿ ಜಿಲ್ಲೆಯಲ್ಲಿ ಈಶಾನ್ಯಾಬಿ üಮುಖವಾಗಿ ಹರಿದು ಕೂಡಲ ಗ್ರಾಮದ ಬಳಿ ವರದಾನದಿಯನ್ನು ಸೇರುವುದು.

	ಹಾವೇರಿ ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆಗಳು ಸಾಕಷ್ಟಿವೆ. ರಾಣೆಬೆನ್ನೂರು ಕೈಮಗ್ಗದ ಸೀರೆ, ಕುಪ್ಪಸ, ಪಂಚೆ, ಹಚ್ಚಡಗಳಿಗೆ ಪ್ರಸಿದ್ಧ. ಹಿರೇಕೆರೂರು, ಹಾನುಗಲ್ಲುಗಳಲ್ಲಿ ಅಕ್ಕಿಗಿರಣಿಗಳಿವೆ. ಖಾದಿ ಗ್ರಾಮೋದ್ಯೋಗಕ್ಕೆ ಸಂಬಂಧಿಸಿದ ಚಟುವಟಿಕೆಗಳುಂಟು. ಜಿಲ್ಲೆಯಲ್ಲಿ ಒಟ್ಟು 20 ಬಟ್ಟೆಕಾರ್ಖಾನೆಗಳು, 2 ರಸಾಯನಿಕ, 10 ಎಂಜನಿಯರಿಂಗ್, 45 ಇತರೇ ಕಾರ್ಖಾನೆಗಳಿದ್ದು ಒಟ್ಟು 77 ಕಾರ್ಖಾನೆಗಳಿಂದ 5,621 ಮಂದಿಗೆ ಉದ್ಯೋಗ ದೊರಕಿದೆ (2001). ಒಂದು ಸಕ್ಕರೆ ಕಾರ್ಖಾನೆಯಿದ್ದು 2000ದ ವರ್ಷದಲ್ಲಿ 276 ಮೆ.ಟನ್ ಕಬ್ಬನ್ನು ಅರೆದು 29 ಮೆ.ಟನ್ ಸಕ್ಕರೆಯನ್ನು ಉತ್ಪಾದಿಸಲಾಗಿತ್ತು. ಜಿಲ್ಲೆಯ ಕೈಗಾರಿಕೆ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ನೆರವಾಗಿ 2001ರಲ್ಲಿ 48 ವಾಣಿಜ್ಯ ಬ್ಯಾಂಕುಗಳೂ 48 ಗ್ರಾಮೀಣ ಬ್ಯಾಂಕುಗಳೂ 6 ನಿಯಂತ್ರಿತ ಮಾರುಕಟ್ಟೆಗಳೂ ಇದ್ದವು. 1999ರಲ್ಲೆ ಈ ಜಿಲ್ಲೆಯಲ್ಲಿ 103 ಕಿಮೀ ರಾಷ್ಟ್ರೀಯ ಹೆದ್ದಾರಿ, 197 ಕಿಮೀ ರಾಜ್ಯ ಹೆದ್ದಾರಿ, 742 ಕಿಮೀ ಮುಖ್ಯ ಜಿಲ್ಲಾ ರಸ್ತೆಗಳಿದ್ದವು. ಬೆಂಗಳೂರು ಹುಬ್ಬಳ್ಳಿ ರೈಲು ಮಾರ್ಗ ಜಿಲ್ಲೆಯಲ್ಲಿ 79 ಕಿಮೀ ದೂರದಷ್ಟಿದ್ದು 9 ರೈಲು ನಿಲ್ದಾಣಗಳಿವೆ.

	ಪ್ರಗತಿಯತ್ತ ಹೆಜ್ಜೆಹಾಕುತ್ತಿರುವ ಹಾವೇರಿ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಗಂಡಸರು ಸೆ. 77.94ರಷ್ಟಿದ್ದರೆ ಹೆಂಗಸರು ಸೆ. 57.60 (2001) ಇದೆ. 1190 ಪ್ರಾಥಮಿಕಶಾಲೆಗಳು, 230 ಪ್ರೌಢಶಾಲೆಗಳು, 59 ಪದವಿಪೂರ್ವಕಾಲೇಜುಗಳು, 2 ಪಾಲಿಟೆಕ್ನಿಕ್, 1 ಎಂಜಿನಿಯರಿಂಗ್, 1 ಭಾರತೀಯ ವೈದ್ಯಪದ್ಧತಿಯ ಕಾಲೇಜುಗಳಿವೆ. ಜಿಲ್ಲೆಯ ವೈದ್ಯಕೀಯ ಸೌಲಭ್ಯ ಕುರಿತಂತೆ 5 ಸರ್ಕಾರಿ ಆಸ್ಪತ್ರೆಗಳೂ, 2 ಆಯುರ್ವೇದ ಆಸ್ಪತ್ರೆಗಳೂ 50 ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಪ್ರಾಥಮಿಕ ಆರೋಗ್ಯ ಘಟಕಗಳೂ ಕುಟುಂಬ ಕಲ್ಯಾಣ ಕೇಂದ್ರಗಳೂ ಇವೆ (2001).

	ಸಾಂಸ್ಕøತಿಕವಾಗಿ, ಐತಿಹಾಸಿಕವಾಗಿ ಹಾವೇರಿ ಜಿಲ್ಲೆ ಗಮನಾರ್ಹ ವಾದದ್ದು. ಇಲ್ಲಿಯ ತುಂಗಭದ್ರಾ ಮತ್ತು ಇತರೆ ನದಿಗಳ ಆಶ್ರಯದಲ್ಲಿ ಪ್ರಾಗೈತಿಹಾಸಿಕ ಕಾಲದಿಂದಲೂ ಜನವಸತಿಗಳನ್ನು ಗುರುತಿಸಬಹುದು. ಹಾವೇರಿ ತಾಲ್ಲೂಕಿನ ಜಲ್ಲಾಪುರ, ರಾಣೆಬೆನ್ನೂರು ತಾಲ್ಲೂಕಿನ ಚನ್ನಾಪುರ, ನಲವಾಗಲ ಮತ್ತು ನದೀಹರಳಹಳ್ಳಿ, ಹಾನಗಲ್ಲು ತಾಲ್ಲೂಕಿನ ವರ್ದಿ ಮೊದಲಾದ ಸ್ಥಳಗಳಲ್ಲಿ ಪುರಾತನ ಶಿಲಾಯುಗದ ಆದಿಭಾಗದಲ್ಲಿ ಪ್ರಚಲಿತವಿದ್ದ ಅಬ್ಬೆವಿಲ್ಲಿಯನ್, ಅಶೂಲಿಯನ್ ಶಿಲಾಯುಧಗಳು ದೊರಕಿವೆ. 

	ನವಶಿಲಾಯುಗದ ಸಂಸ್ಕøತಿಗಳಿಗೆ ಸಂಬಂಧಿಸಿದ ಅನೇಕ ನೆಲೆಗಳು ರಾಣೆಬೆನ್ನೂರು ತಾಲ್ಲೂಕಿನ ಅಸುಂಡಿ, ಮುದೇನೂರುಗಳಲ್ಲಿ ದೊರಕಿವೆ. ಇವುಗಳಲ್ಲಿ ದಕ್ಷಿಣಭಾರತದ ನವಶಿಲಾಸಂಸ್ಕøತಿಯ ಉಜ್ಜಿ ನಯಮಾಡಿದ ಕಲ್ಲಿನ ಕೊಡಲಿ, ಕಂದು ಬಣ್ಣದ ಮಡಕೆಗಳು ಸಿಕ್ಕಿವೆ. ರಾಣೆಬೆನ್ನೂರು ತಾಲ್ಲೂಕಿನ ಕೂನಬೇವ, ಹಾನಗಲ್ಲು ತಾಲ್ಲೂಕಿನ ಹಾದರಗೇರಿ, ಹಿರೇಕೆರೂರು ತಾಲ್ಲೂಕಿನ ಪುರದಕೇರಿ ಇಲ್ಲೆಲ್ಲಾ ಕೆಂಪು ಬಣ್ಣದ ಮೇಲೆ ಕಪ್ಪು ಬಣ್ಣದ ಚಿತ್ರಗಳುಳ್ಳ ಮಡಕೆಯ ಚೂರುಗಳು ದೊರಕಿವೆ. ಬೃಹತ್ ಶಿಲಾಸಮಾಧಿಕಾಲದ ಶಿಲಾವೃತ್ತಗಳು ರಾಣೆಬೆನ್ನೂರು ತಾಲ್ಲೂಕಿನ ಅಸುಂಡಿ, ಕೋಟೆಹಾಳ ಕುಸನೂರು ಮತ್ತು ಮಲಕನಹಳ್ಳಿ, ಬ್ಯಾಡಗಿ ತಾಲ್ಲೂಕಿನ ಬುಡಪನಹಳ್ಳಿ ಮೊದಲಾದೆಡೆ ಸಿಕ್ಕಿವೆ. ಈ ಪ್ರದೇಶಗಳಲ್ಲಿ ಇವುಗಳನ್ನು ಪಾಂಡವರ ಕಟ್ಟೆ ಎಂದು ಕರೆಯುತ್ತಾರೆ. ಬ್ಯಾಡಗಿ ತಾಲ್ಲೂಕಿನ ಆಣೂರು, ಕದರಮಂಡಲಗಿ, ತಡಸಿ, ರಾಣೆಬೆನ್ನೂರು ತಾಲ್ಲೂಕಿನ ಐರಣಿ, ಇಟಗಿ, ಮಾದಾಪುರ, ಹೊನ್ನತ್ತಿ ಹಾನಗಲ್ಲು ತಾಲ್ಲೂಕಿನ ಹಿರೇಬಾಸೂರು, ಹಾವೇರಿ ತಾಲ್ಲೂಕಿನ ಹಂದಿಗನೂರು, ಸಂಗೂರು, ಹೊಸರಿತ್ತಿ ಈ ನೆಲೆಗಳಲ್ಲಿ ಕೆಂಪು ಮಡಕೆಗಳು, ಗಾಜಿನ ಮಣಿಗಳು, ರೋಮನ್ ಮೂಲದ ರೂಲೆಟೆಡ್ ಇತ್ಯಾದಿ ಸಾತವಾಹನರ ಆಳಿಕೆಯ ಕಾಲದ್ದೆನ್ನುವ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಹಿರೇಕೆರೂರು ತಾಲ್ಲೂಕಿನ ಹಳ್ಳೂರಿನಲ್ಲಿ ನಡೆದ ಶೋಧನೆಯಲ್ಲಿ ನವಶಿಲಾಯುಗ, ತಾಮ್ರಶಿಲಾಯುಗ ಮತ್ತು ಕಬ್ಬಿಣಯುಗದ ಸ್ತರಗಳನ್ನು ಪತ್ತೆಮಾಡಲಾಗಿದೆ.

	1836ರಲ್ಲಿ ಧಾರವಾಡ ಜಿಲ್ಲೆಯ ರಚನೆಯಾಗಿ ಈಸ್ಟ್‍ಇಂಡಿಯಾ ಕಂಪನಿಯ ನಿರ್ದೇಶಕರುಗಳ ತೀರ್ಮಾನದಂತೆ ಇದನ್ನು ಮುಂಬಯಿ ಪ್ರಾಂತ್ಯಕ್ಕೆ ಸೇರಿಸಲಾಗಿತ್ತು. ಅಂದಿನಿಂದ ಹಾವೇರಿ ಹಾಗೂ ಅದರ ಸುತ್ತ ಮುತ್ತಲ ಪ್ರದೇಶಗಳು ಈ ಜಿಲ್ಲೆಗೆ ಸೇರಿದ್ದುವು. ಇದಕ್ಕೂ ಮೊದಲು ಈ ಭಾಗದ ಇತಿಹಾಸ ಮೌರ್ಯ ಮತ್ತು ಸಾತವಾಹನರ ಕಾಲದಲ್ಲಿ ಪ್ರಾರಂಭವಾಗಿ ಮುಂದುವರಿದು ಬಂತು. ಬನವಾಸಿಯ ಕದಂಬರು, ಬಾದಾಮಿಯ ಚಾಳುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, ಕಳಚುರಿ ಮತ್ತು ಯಾದವರ ಆಡಳಿತಕ್ಕೆ ಈ ಪ್ರದೇಶಗಳು ಸೇರಿದ್ದುವು. ವಿಜಯನಗರದ ಅರಸರ ಅನಂತರ ಸು. 1575ರಿಂದ ಈ ಪ್ರದೇಶ ಆದಿಲ್‍ಶಾಹೀ ಆಡಳಿತಕ್ಕೆ ಒಳಪಟ್ಟಿತು. 1686-1820ರ ಕಾಲದಲ್ಲಿ ಮೊಗಲರ ಆಡಳಿತ ನಡೆದಿತ್ತು. ಆಗ ಅಬ್ದುಲ್ ರಹೂಫ್ ಸವಣೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡ. ಹೈದರಾಬಾದಿನ ನಿಜಾಮರ ಆಡಳಿತಕ್ಕೆ ಮತ್ತು ಸ್ವಲ್ಪಕಾಲ ಟಿಪ್ಪುಸುಲ್ತಾನ್ ಆಡಳಿತಕ್ಕೆ ಸವಣೂರು ಮತ್ತು ಸುತ್ತಲ ಪ್ರದೇಶಗಳು ಸೇರಿದ್ದುವು. ಮುಂದೆ ಮರಾಠರ ಆಡಳಿತ ಬಂತು. 1818-30ರವರೆಗೆ ಬ್ರಿಟಿಷರ ಆಡಳಿತಕ್ಕೆ ಸೇರಿತ್ತು. 1836ರಲ್ಲಿ ಬೆಳಗಾಂವಿ ಜಿಲ್ಲೆ ರಚನೆಯಾಯಿತು. 1857-58ರಲ್ಲಿ ನರಗುಂದದ ಬಾಬಾಸಾಹೇಬ್, ಮುಂಡರಗಿ ಭೀಮರಾವ್ ಇನ್ನೂಅನೇಕರು ಬ್ರಿಟಿಷ್ ಆಡಳಿತವನ್ನು ಪ್ರತಿಭಟಿಸಿ ಹೋರಾಡಿದ ವಿಷಯ ಬಹು ಮುಖ್ಯವಾದದ್ದು.

	ಹಾವೇರಿ ಜೆಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರ ಮಂಡಲಗಿಯಲ್ಲಿ ಪುರಾಣ ಪ್ರಸಿದ್ಧನಾದ ಜನಮೇಜಯ ಮಹಾರಾಜ ಕಟ್ಟಿಸಿದ್ದೆನ್ನಲಾದ ಮಾರುತಿ ದೇವಾಲಯವಿದೆ. ಕಾಗಿನೆಲೆಯಲ್ಲಿ ಕನಕದಾಸರು ಕಟ್ಟಿಸಿರುವ ಆದಿಕೇಶವ ದೇವಾಲಯವಿದೆ. ಮೋಟೆಬೆನ್ನೂರಿನಲ್ಲಿರುವ ಮಲ್ಲಿಕಾರ್ಜುನ ದೇವಾಲಯದಲ್ಲಿ 1051ರ ಒಂದುಶಾಸನವಿದೆ. ಶಿಗ್ಗಾಂವಿ ತಾಲ್ಲೂಕಿನ ಹಿರೇಬೆಂಡಿಗೇರಿಯ ಕಾಳಪ್ಪನ ದೇವಾಲಯದಲ್ಲಿ 6ನೆಯ ಚಾಳುಕ್ಯವಿಕ್ರಮಾದಿತ್ಯ, 2ನೆಯ ಜಗದೇಕಮಲ್ಲ ಮತ್ತು 2ನೆಯ ಕಳಚುರಿ ಬಿಜ್ಜಳ ಇವರ ಕಾಲದ ಶಾಸನಗಳಿವೆ. ಹುಲಗೂರಿನ ಸಿದ್ಧಲಿಂಗ ದೇವಾಲಯದಲ್ಲಿ ಸು. 970ರ ಖೊಟ್ಟಿಗನ ಶಾಸನದ ಜೊತೆಗೆ 15 ಶಾಸನಗಳು ದೊರಕಿವೆ. ಸವಣೂರಿನಲ್ಲಿ ಮಸೀದಿಗಳೂ ದೇವಸ್ಥಾನಗಳೂ ಸತ್ಯಬೋಧಸ್ವಾಮಿಗಳ ಮಠ, ನವಾಬನ ಅರಮನೆ, ಕೋಟೆಯ ಅವಶೇಷಗಳು ಇವೆ. ಹಿರೇಕೆರೂರು ತಾಲ್ಲೂಕಿನಲ್ಲಿ ಮಾಸೂರಿನ ಮದಗ ಕೆರೆ, ಹಳೆಕೋಟೆಯಿದೆ. ಇಲ್ಲಿನ ಅಬ್ಬಲೂರು ಸರ್ವಜ್ಞನ ಹುಟ್ಟೂರೆನ್ನುವರು. ಶಿಗ್ಗಾಂವಿಯ ಬಾಡ, ಸಂತಶಿಶುನಾಳ ಷರೀಫರು ಜನಿಸಿದ ಶಿಶುನಾಳಗ್ರಾಮ ಈ ಜಿಲ್ಲೆಗೆ ಸೇರಿವೆ.

	ತಾಲ್ಲೂಕು: ಜಿಲ್ಲೆಯ ಮಧ್ಯದಲ್ಲಿರುವ ಹಾವೇರಿ ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಸವಣೂರು ತಾಲ್ಲೂಕೂ ಪೂರ್ವದಲ್ಲಿ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕೂ ದಕ್ಷಿಣದಲ್ಲಿ ಬ್ಯಾಡಗಿ ಮತ್ತು ರಾಣೆಬೆನ್ನೂರು ತಾಲ್ಲೂಕುಗಳೂ ಪಶ್ಚಿಮದಲ್ಲಿ ಹಾನಗಲ್ಲು ತಾಲ್ಲೂಕೂ ಸುತ್ತುವರಿದಿವೆ. ತಾಲ್ಲೂಕಿನಲ್ಲಿ 88 ಗ್ರಾಮಗಳಿವೆ. ವಿಸ್ತೀರ್ಣ 799.9 ಚ.ಕಿಮೀ. ಜನಸಂಖ್ಯೆ 2,51,951.

	ಈ ತಾಲ್ಲೂಕು ಸಣ್ಣ ಗುಡ್ಡಗಳಿಂದ ಕೂಡಿದ ಕಪ್ಪು ಮಣ್ಣಿನ ಬಯಲು ಪ್ರದೇಶಕ್ಕೆ ಸೇರಿದೆ. ವರದಾ ಮತ್ತು ತುಂಗಭದ್ರಾ ಈ ತಾಲ್ಲೂಕಿನ ಮುಖ್ಯ ನದಿಗಳು. ವರದಾ ನದಿ ತಾಲ್ಲೂಕಿನ ಪಶ್ಚಿಮದಲ್ಲಿ ಮತ್ತು ಉತ್ತರದಲ್ಲಿ ಸ್ವಲ್ಪ ದೂರದವರೆಗೆ ಗಡಿಯಾಗಿ ಹರಿದು ಹಾನಗಲ್ಲು ಮತ್ತು ಸವಣೂರು ತಾಲ್ಲೂಕುಗಳನ್ನು ಬೇರ್ಪಡಿಸಿ ಮಣ್ಣೂರ ಬಳಿ ತಾಲ್ಲೂಕನ್ನು ಪ್ರವೇಶಿಸಿ ಪೂರ್ವಾಭಿಮುಖವಾಗಿ ಹರಿದು ಗಳಗನಾಥದ ಬಳಿ ತುಂಗಭದ್ರಾ ನದಿಯನ್ನು ಕೂಡಿಕೊಳ್ಳುವುದು. ತುಂಗಭದ್ರಾ ನದಿ ತಾಲ್ಲೂಕಿನ ಪೂರ್ವದಲ್ಲಿ ಗಡಿಯಾಗಿ ಹರಿದು, ಮಧ್ಯೆ ಸ್ವಲ್ಪ ದೂರ ಮಾತ್ರ ತಾಲ್ಲೂಕಿನ ಒಳಗೆ ಪ್ರವೇಶಿಸಿ ಮತ್ತೆ ಗಡಿಯಾಗಿ ಹರಿದು ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕನ್ನು ಬೇರ್ಪಡಿಸಿದೆ. ಈ ನದಿಯ ಎಡದಂಡೆ ಮತ್ತು ವರದಾ ನದಿಯ ಬಲದಂಡೆ ಮತ್ತು ತಾಲ್ಲೂಕಿನ ಒಳಗೆ ಎರಡೂ ಕಡೆ ರೇವೆಮಣ್ಣಿನ ಪ್ರದೇಶವಿದೆ. ಉಳಿದ ಭಾಗದಲ್ಲಿ ಕೆಂಪುಮಿಶ್ರ ಕಪ್ಪುಮಣ್ಣಿನ ಭೂಮಿಯಿದೆ. ಉತ್ತಮ ಹವಾಗುಣವಿದ್ದು ವಾರ್ಷಿಕ ಸರಾಸರಿ ಮಳೆ 719.92 ಮಿಮೀ. ತಾಲ್ಲೂಕಿನಲ್ಲಿ ಜೋಳ, ಬತ್ತ, ರಾಗಿ, ನವಣೆ, ಕಬ್ಬು, ಸೇಂಗಾ, ಗುರೆಳ್ಳು, ಮೆಣಸಿನಕಾಯಿ, ಈರುಳ್ಳಿ, ಹತ್ತಿ ಮುಂತಾದವನ್ನು ಬೆಳೆಯುತ್ತಾರೆ. ನಿಂಬೆ, ವೀಳೆಯದೆಲೆ, ಕೆಲವು ಬಗೆಯ ಫಲಗಳು, ತಂಬಾಕು, ವಿವಿಧ ತರಕಾರಿಗಳನ್ನೂ ಬೆಳೆಯುತ್ತಾರೆ. ಪಶುಪಾಲನೆಯುಂಟು. ಕುರಿಸಾಕಣೆ ಕೇಂದ್ರವಿದ್ದು ಈ ತಾಲ್ಲೂಕಿನಲ್ಲಿ ಕುರಿಗಳ ಅಭಿವೃದ್ಧಿಗೆ ಸಾಕಷ್ಟು ಗಮನ ಕೊಡಲಾಗಿದೆ.

	ತಾಲ್ಲೂಕಿನಲ್ಲಿ ಕೈ ಮಗ್ಗದ ಬಟ್ಟೆ ಮತ್ತು ಚರ್ಮ ವಸ್ತುಗಳ ತಯಾರಿಕೆಯುಂಟು. ಸೇಂಗಾ ಎಣ್ಣೆ, ಹೆಂಚು ಮತ್ತು ಇಟ್ಟೆಗೆಗಳನ್ನೂ ಇಲ್ಲಿ ತಯಾರಿಸುವರು. ಈ ತಾಲ್ಲೂಕಿನಲ್ಲಿ ಬೆಂಗಳೂರು-ಬೆಳಗಾಂವಿ ರೈಲುಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ.

	ಹಾವೇರಿಯ ಪಶ್ಚಿಮಕ್ಕೆ 11 ಕಿಮೀ ದೂರದಲ್ಲಿರುವ ಸಂಗೂರು ವರದಾನದಿಯ ಬಲದಂಡೆಯ ಮೇಲಿದೆ. ಇಲ್ಲಿ ಈಶ್ವರ ಮತ್ತು ವೀರಭದ್ರ ದೇವಾಲಯಗಳೂ ಒಂದು ಹಳೇ ಕೋಟೆಯ ಅವಶೇಷಗಳೂ ಇವೆ. ಇಲ್ಲಿನ 1265ರ ಶಾಸನದಲ್ಲಿ ಈ ಗ್ರಾಮವನ್ನು ಸೊನ್ನಲಿಗೆಯ ಕಪಿಲಸಿದ್ಧ ಮಲ್ಲಿಕಾರ್ಜುನ ದೇವರಿಗೆ ದಾನ ಕೊಟ್ಟದ್ದು ತಿಳಿದುಬರುತ್ತದೆ. 1407ರ ಇನ್ನೊಂದು ಶಾಸನದಲ್ಲಿ ವಿಜಯನಗರ ಸ್ಥಾಪನೆಗೆ ಮೊದಲು ಉತ್ತರದಿಂದ ಬರುವ ಮುಸ್ಲಿಮರನ್ನು ತಡೆದ ಕುಮಾರ ರಾಮನಾಥನ ವಿಷಯ ತಿಳಿದುಬರುತ್ತದೆ. ಹಾವೇರಿಯ ಪಶ್ಚಿಮಕ್ಕೆ 8 ಕಿಮೀ ದೂರದಲ್ಲಿರುವ ದೇವೀಹೊಸೂರು ಗ್ರಾಮದಲ್ಲಿ ಹಾವೇರಿಯ ವಾಯವ್ಯಕ್ಕೆ 11 ಕಿಮೀ ದೂರದಲ್ಲಿರುವ ದೇವಗಿರಿಯಲ್ಲಿ ರಾಷ್ಟ್ರಕೂಟ, ಚಾಳುಕ್ಯ, ಕಳಚುರಿ ಮತ್ತು ಸೇವುಣರ ಕಾಲದ ಶಾಸನಗಳಿವೆ. 12ನೆಯ ಶತಮಾನದಲ್ಲಿ ಇದು ಶಿಲಾಹಾರರ ಒಡೆತನಕ್ಕೆ ಸೇರಿತ್ತು. ಇಲ್ಲಿರುವ ಎಲ್ಲಮ್ಮ ದೇವಾಲಯವನ್ನು ಜಕಣಾಚಾರಿ ಕಟ್ಟಿದ್ದೆಂದು ಪ್ರತೀತಿ. ಇಲ್ಲಿ ಹನುಮಂತ ಮತ್ತು ಬಸವಣ್ಣ ದೇವಾಲಯಗಳಿವೆ. ವರದಾನದಿಯ ಬಲದಂಡೆಯ ಮೇಲೆ ಹಾವೇರಿಗೆ ಈಶಾನ್ಯದಲ್ಲಿ 11 ಕಿಮೀ ದೂರದಲ್ಲಿ ರುವ ಕರ್ಜಗಿ 1905ರ ವರೆಗೆ ಹಿಂದಿನ ಕರ್ಜಗಿ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಹಾವೇರಿಗೆ ಈಶಾನ್ಯದಲ್ಲಿ 40 ಕಿಮೀ ದೂರದಲ್ಲಿರುವ ಗಳಗನಾಥ ತುಂಗಭದ್ರಾನದಿಯ ಎಡದಂಡೆಯಲ್ಲಿ ವರದಾನದಿ ತುಂಗಭದ್ರೆಯನ್ನು ಕೂಡುವ ಸಂಗಮದ ಬಳಿಯಿದೆ. ಇಲ್ಲಿ ಪ್ರಸಿದ್ಧ ಗಳಗನಾಥ ದೇವಾಲಯವಿದೆ. ಇಲ್ಲಿರುವ ಹನುಮಂತ ದೇವಾಲಯದಲ್ಲಿ ವೀರಗಲ್ಲೊಂದಿದೆ. ಆರನೆಯ ವಿಕ್ರಮಾದಿತ್ಯನ 1079 ಮತ್ತು 1080ರ ಎರಡು ಶಾಸನಗಳಿದ್ದು ಇವನ ತಮ್ಮ ಜಯಸಿಂಹ ಈ ಪ್ರದೇಶದ ಆಡಳಿತಾಧಿಕಾರಿಯಾಗಿದ್ದನೆಂದು ತಿಳಿದುಬರುವುದು. ಹಾವೇರಿಯ ಪೂರ್ವಕ್ಕೆ ತಾಲ್ಲೂಕಿನ ಅಂಚಿನಲ್ಲಿ ತುಂಗಾಭದ್ರಾನದಿಯ ಎಡದಂಡೆಯ ಮೇಲಿರುವ ಹರಳಹಳ್ಳಿ ಹಾವೇರಿ-ಬಳ್ಳಾರಿ ಮಾರ್ಗದಲ್ಲಿದೆ. ಇಲ್ಲಿ 11 ಮತ್ತು 12ನೆಯ ಶತಮಾನದ ಕಳಚುರಿ ಮತ್ತು ಸೇವುಣರ ಕಾಲದ 5 ಶಾಸನಗಳಿವೆ. ಪ್ರಸಿದ್ಧ ಪುರಾತನ ಸೋಮೇಶ್ವರ ಮತ್ತು ಕಾಳೇಶ್ವರ ದೇವಾಲಯಗಳಿವೆ.

	ಹಾವೇರಿ ಪಟ್ಟಣ, ಜಿಲ್ಲೆಯ ಮತ್ತು ಈ ತಾಲ್ಲೂಕಿನ ಆಡಳಿತ ಕೇಂದ್ರ. ಬೆಂಗಳೂರು-ಬೆಳಗಾಂವಿ ಹೆದ್ದಾರಿಯಲ್ಲಿ ಧಾರವಾಡಕ್ಕೆ ಆಗ್ನೇಯದಲ್ಲಿ 95 ಕಿಮೀ ದೂರದಲ್ಲಿದೆ. ಜನಸಂಖ್ಯೆ 55,900.

	ತಾಲ್ಲೂಕಿನ ಮತ್ತು ಸುತ್ತಲ ಗ್ರಾಮಗಳಿಗೆ ಇದು ಒಂದು ಮುಖ್ಯ ವ್ಯಾಪಾರ ಕೇಂದ್ರ. ಬೆಂಗಳೂರು-ಬೆಳಗಾಂವಿ ರೈಲುಮಾರ್ಗದ ಒಂದು ಮುಖ್ಯ ರೈಲು ನಿಲ್ದಾಣವಾಗಿದ್ದು ವ್ಯಾಪಾರ-ವಾಣಿಜ್ಯಾಭಿವೃದ್ಧಿಗೆ ಅನುಕೂಲವಾಗಿದೆ.

ಶಾಸನಗಳ ಮೇರೆಗೆ ಈ ನಗರ ಪಾವರಿ, ಹಾವರಿ, ಹಾಹರಿ, ಹಾವೇರಿ ಮತ್ತು ನಳಪುರಿ ಎಂಬ ಹೆಸರಿನಿಂದ ಪೂರ್ವಕಾಲದಲ್ಲಿ ಪ್ರಸಿದ್ಧವಾಗಿತ್ತು. ರಾಷ್ಟ್ರಕೂಟ ಮೂರನೆಯ ಕೃಷ್ಣನ ಕಾಲದ ಒಂದು ಶಾಸನದಲ್ಲಿ ಈ ನಗರದ ಮೊಟ್ಟಮೊದಲ ಉಲ್ಲೇಖ ಸಿಗುವುದರಿಂದ 10ನೆಯ ಶತಮಾನಕ್ಕಿಂತ ಪೂರ್ವದಲ್ಲಿಯೇ ಹಾವೇರಿ ಅಸ್ತಿತ್ವದಲ್ಲಿದ್ದಿ ತೆಂದು ವ್ಯಕ್ತವಾಗುತ್ತದೆ. ಚಾಳುಕ್ಯ ವಂಶದ ಒಂದನೆಯ ಸೋಮೇಶ್ವರನ ಕಾಲದಲ್ಲಿ ಇದು ಅಗ್ರಹಾರವಾಗಿ ಮಾರ್ಪಟ್ಟಿತು. ಮಹಾಜನರೆಂದು ಕರೆಯಲ್ಪಡುತ್ತಿದ್ದ ನಗರಪ್ರತಿನಿಧಿಗಳಿಂದ ಈ ನಗರದ ಆಡಳಿತ ನಡೆಯುತ್ತಿತ್ತು. ಚಾಳುಕ್ಯ, ಕಳಚುರಿ, ಹೊಯ್ಸಳ ಮತ್ತು ಸೇವುಣರ ರಾಜ್ಯಗಳಲ್ಲಿ ಇದು ಒಂದು ಪ್ರಸಿದ್ಧವಾದ ನಗರವಾಗಿತ್ತೆಂದು ಇಲ್ಲಿ ದೊರೆಯುವ ಶಾಸನಗಳಿಂದ ತಿಳಿದುಬರುತ್ತದೆ. ಇಲ್ಲಿನ ಸಿದ್ದೇಶ್ವರ, ನರಸಿಂಹ, ವೀರಭದ್ರ ಮತ್ತು ಕಲ್ಲೇಶ್ವರ ದೇವಸ್ಥಾನಗಳಲ್ಲಿ ಅತಿಮುಖ್ಯ ವಾದ ಸಿದ್ದೇಶ್ವರ ದೇವಸ್ಥಾನ ಕಲ್ಯಾಣ ಚಾಳುಕ್ಯರ ಕಾಲದ ವಾಸ್ತುಶಿಲ್ಪಶೈಲಿಯಲ್ಲಿದೆ. ಈ ದೇವಸ್ಥಾನದ ಅಧಿಷ್ಠಾನದಲ್ಲಿನ ಸಾಲು ಪಟ್ಟಿಕೆಗಳ ಕುಸುರಿ ಕೆತ್ತನೆಕೆಲಸ ಹೊಯ್ಸಳರ ದೇವಾಲಯಗಳಲ್ಲಿನ ಸೂಕ್ಷ್ಮ ಕೆತ್ತನೆ ಕೆಲಸಗಳಷ್ಟೇ ಆಕರ್ಷಣೀಯವಾಗಿದೆ. ಇದರ ಶಿಖರದ ಪ್ರಮಾಣ ಬದ್ಧತೆ ಮತ್ತು ಅಚ್ಚುಕಟ್ಟುತನ ಮನೋಹರವಾಗಿದೆ. ಈ ದೇವಸ್ಥಾನದೊಳಗಿರುವ ಉಮಾಮಹೇಶ್ವರ, ಶಿವಲಿಂಗವನ್ನು ಹಿಡಿದಿರುವ ವಿಷ್ಣು, ಮಹಾಲಕ್ಷ್ಮಿ, ಸೂರ್ಯ ಮತ್ತು ನಾಗ-ನಾಗಿಣಿ ವಿಗ್ರಹಗಳು ಹಾಗೂ ಛತ್ತಿನಲ್ಲಿ ಕೆತ್ತಿರುವ ನೃತ್ಯ ಭಂಗಿಯಲ್ಲಿರುವ ಅಷ್ಟಮಾತೃಕೆಯರು ಗಮನಾರ್ಹವಾದವು. ಈ ನಗರದ ದೊಡ್ಡ ಕೆರೆಯನ್ನು ನಳಚಕ್ರವರ್ತಿ ಕಟ್ಟಿಸಿದನೆಂಬ ಐತಿಹ್ಯ ಶಾಸನಗಳಿದ್ದು ಇದನ್ನು ಪವಿತ್ರ ತೀರ್ಥವೆಂದು ಪರಿಗಣಿಸಲಾಗಿದೆ. ಈಗಲೂ ಯಾತ್ರಿಗಳು ಸಂಕ್ರಮಣದ ದಿನ ಪರ್ವಸ್ನಾನಕ್ಕೆಂದು ಈ ಕೆರೆಗೆ ಬರುತ್ತಾರೆ. ಹಾವೇರಿಯ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ, ವೀರಗಲ್ಲುಗಳು ಹೇರಳವಾಗಿ ದೊರೆಯುತ್ತವೆ.							
				(ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ